Monday, December 23, 2019

ಒಡುಟ್ಟು...

ನೀನಾರು, ಅವನಾರು, ಇವನ್ಯಾರು?
ಒಂದೇ ಅಲ್ಲವೇನು?
ಅದೇ ತಾಯ ಉದರದಿ,
ಜನಿಸಿ ಬಂದವರಲ್ಲವೇನು?

ಸಣ್ಣವರಿದ್ದಾಗ ಕಲಿತ;
ಪ್ರೀತಿ-ವಾತ್ಸಲ್ಯವು,
ಸಮಾನತೆಯ, ಸಹಬಾಳ್ವೆಯ ಪಾಠವು,
ಮರೆತೇ ಹೋಯಿತೇನು?

ಸೋದರ ವಾತ್ಸಲ್ಯಾದಿ;
ಬಿದ್ದು ಬೆರೆದ, ಬೆನ್ನಿಗೆ ಬಿದ್ದ ಸೋದರನು,
ಮಣ್ಣಲ್ಲಿ ಮಣ್ಣಾಗಿ ಲೀನವಾಗಲು;
ಕಣ್ಣಲ್ಲಿ ಹನಿ ನೀರು ಜಿನುಗದ ಕಲ್ಲಾದೆಯೇನು?

ಒಂದೇ ಮನೆಯ ಅಂಗಳದಲಿ 
ಕೂಡಿ-ಆಡಿ, ಹಂಚಿ-ಉಂಡು; 
ನಲಿದು-ಬೆಳೆದ ಕ್ಷಣಗಳು; 
ನೆನಪಿಗೆ ಬಾರದೇನು? 

ಅವ ಮುಂದೆ, ತಾ ಹಿಂದೆ;
ಸರ್ವರೂ ಒಂದಿಲ್ಲೊಂದು ದಿನ
ಪರಶಿವನು ಕರೆದಾಗ ಸಾಗಲೇಬೇಕೆನ್ನುವ;
ಕಟುಸತ್ಯವ ಮರೆತೆಯೇನು?

ಮಾಡಿದ್ದುಣ್ಣು ಮಾರಾಯ - ಎನ್ನುವ  
ಮಾತನರಿತು ನಡಿಯೇ ನೆಲೆ!
ನಾ ಮಾಡಿದ್ದೆ ಸರಿ! ತಾ ನಡೆದ್ದಿದ್ದೆ ದಾರಿ - ಎನ್ನಲು 
ದೊರೆಯದು ಭಗವಂತನ ಒಲುಮೆ!

- ಸಂತೋಷ್ ನಾಗಲಾಂಬ ಶಿವಣ್ಣ

Tuesday, October 22, 2019

ಜಡಧರ-ಜಡಧಿ ಸಮಾಗಮ..!

ಜಡಧರ-ಜಡಧಿ ಸಮಾಗಮ..!

ಜಡಧರನ ತುದಿಗಾಲಿನ ತುಡಿತ; 
ಜಡಧಿಯ ಸೇರಲು ಮಿಡಿತ; 
ಜಡಧರನ ಜಬರಿನ ಅಂಚಲ್ಲೇ ಜಡಧಿಯೆಡೆಗೆ ಸೆಳೆತ; 
ಜಡಧರ-ಜಡಧಿಯ ಸಮಾಗಮ ಬಲು ಜರಬು ಸರಿತ!

- ಸಂತೋಷ್

ವಸುಂಧರೆ..!

ಅವಳೂ ಒಂದೊಮ್ಮೆ ಮಡಿಲಲಿ 
ನಗುವ ಹಸುಳೆಯೇ;

ನಾಳೆಯನರಿಯದೇ  ಕುಪ್ಪಳಿಸಿ ಕುಣಿಕುಣಿದ 
ನಡುಮನೆಯ ಮಗಳೇ;

ಎಲ್ಲರೊಡಗೂಡಿ ಸರಿಸಮದಿ  
ಬೆಳೆಯಲಿಚ್ಚಿಸಿದ್ದ ಕುವರಿಯೇ;

ಅವಳ ನೋಡುವ ಕಣ್ಣುಗಳು,
ಸದೃಷ್ಟಿಯಲಿ ಅವಳ ಕಾಣದೇ;

ಅವಳಿಗೆ ದಾರಿ ತೋರುವ ದೀಪವೇ ನಂದುಹೋಗಿ,
ತಪ್ಪು ದಾರಿಗೆ ಆಹ್ವಾನಿಸಿದರೆ;

ತಪ್ಪು ಒಪ್ಪು ಅರಿವಿರದ ಹರೆಯ, 
ಸಹಾಯ ಹಸ್ತಗಳೆಲ್ಲವೂ ಕೈ ಚೆಲ್ಲಿರುವ ಸಮಯ;

ತನ್ನ ಹೊಟ್ಟೆ ಹೊರೆಯಲು, ತನ್ನವರ ತಾನೆರೆಯಲು;
ತನ್ನ ತ್ಯಜಿಸುವುದೊಂದೇ ದಾರಿಯೆಂದು ತನ್ನವರೇ ತಿಳಿಸಿದರೇ;

ತಾನೋ-ತನ್ನವರೋ, ಅರಿತೋ-ಅರಿಯದೆಯೋ,
ಎಡುವಿದ ಈಕೆಗೆ ಸಿಕ್ಕ ಪಟ್ಟ ವೇಶ್ಯೆ!

ಸ್ವರ್ಗಕ್ಕೆ ಕಿಚ್ಚ ಹಚ್ಚುವಷ್ಟು  ಸುಖವನೀವ ಮನೆ-ಮಡದಿ ಇದ್ದರೂ
ಇವಳೆಡೆಗೆ ಹೆಜ್ಜೆಹಾಕುವರ ಏನೆನ್ನಲೀ?  

ಈ ಎಲ್ಲ ನೋವು-ಅವಮಾನದಲಿ, ಮೋಸ ದ್ರೋಹವ ಸಹಿಸಿ ಬಾಳುತಲಿ;
ತನ್ನ ನೋವಲ್ಲೂ ನಲಿವನ್ಹಂಚಿ ಬಾಳುತಿರುವ ಈಕೆ ವಸುಂಧರೆಯೇ ಸರಿ...!

- ಸಂತೋಷ್

Wednesday, October 2, 2019

ಜೀವನ...!


ಬದುಕಲ್ಲಿ ಬದುಕಲು ಬಯಕೆಯ ಆಸರೆ,
ಬಯಕೆಯೇ ಜೀವನವಾದರೆ ಬೇಸರದ ತವರೂರೆ!

ಬಾಳಲಿ ಬರುವ ಪ್ರತಿ ಪಾತ್ರವೂ ಅವಶ್ಯವೇ,
ಒಂದಿಲ್ಲೊಂದು ರೀತಿಯಲಿ ಎಲ್ಲವೂ ಅವನ ಆಟವೇ.

ಬದುಕೆನ್ನುವ ಪರೀಕ್ಷೆಯಲಿ ಪೂರ್ಣಾಂಕವ ಗಳಿಸಿದವರೆಷ್ಟು?
ಬದುಕನು, ಪರಿಪೂರ್ಣ ಅರಿತು ಕಲಿತು ಮೆರೆದವರೆಷ್ಟು?

ಭೂಮಿಗೆ ಬಿದ್ದೊಡನೆ ನೂರು ಸಂಬಂಧವು ಬೆಸೆವುದು,
ಆದರೆ, ಅಪ್ಪ, ಅಮ್ಮ, ರಕ್ತ ಸಂಬಂಧವೇ ಕಡೇವರೆಗು ಇರದು.

ಯೋಗಿ, ಭೋಗಿ, ಜೋಗಿ ಎಲ್ಲರೂ ಅವನ ಮಕ್ಕಳೇ,
ಅವಗಿಂತ ಪೋಷಿಸುವ ಪೋಷಕರ ಕಂಡೀರೆ?

ಇರುಳು ಕಂಡವಗೆ ತಿಳುವುದು, ಹಗಲ ಬೆಲೆ,
ಕಷ್ಟ ಪಡದೆ ದೊರೆಯದು, ಸುಖದ ನೆಲೆ.

ಸುಖ - ದುಃಖಗಳ, ಸಂಬಂಧ - ನಿರ್ಬಂಧಗಳ ಸಮತೋಲನವೇ,
ಸರಿ - ತಪ್ಪುಗಳ, ಸ್ನೇಹ - ಪ್ರೀತಿಗಳ ಸರಿಮಿಶ್ರಣವೇ - ಜೀವನದ ನಿಜ ಅರ್ಥವು!

ಸಂತೋಷ್

Monday, September 30, 2019

ಇವಳು ಮನುಕುಲದ ಶ್ರೀ...!

ಅಮ್ಮನ ಕಣ್ರೆಪ್ಪೆಯಲಿ ಬೆಳೆದು;
ತಾನು ತನ್ನವರ ತೊರೆದು ನಡೆದು;
ಮೆಟ್ಟಿದ ಮನೆಗೆ ಬೆಳಕಾಗಿ ಬೆಳಗಿ ನಿಂದು;
ಸರ್ವಕಾಲಕ್ಕೂ ಸರ್ವಸ್ವಕೊ  ಇವಳೇ ಕೇಂದ್ರ ಬಿಂದು.

ಬಿಸಜ ಮುಖದವಳು, ಉದಾರ ಮನದವಳು;
ಗಂಡನ ಕೈ ಹಿಡಿದು ನಡೆದವಳು;
ಅವನ ಪ್ರತಿ ಕನಸಿಗೂ ಜೀವ ತುಂಬಿದವಳು;
ಅವನೆಲ್ಲ ಸಾಧನೆಗೆ ಸ್ಪೂರ್ತಿ ಇವಳು.

ಬವಣೆಯಲ್ಲೂ ಬವಣಿಸುವ ಶರಣೆ;
ಕಷ್ಟಕಾಲದ ಯುಕ್ತಿ ಸರಣಿ;
ಬಡತನದಲಿ ಭರವಸೆಯ ಭರಣಿ;
ಸಿರಿತನದ ಸಿರಿಯೇ ಈ ಅರಗಿಣಿ.

ಆದರೆ,

ಇವಳ ನೂರು ಕನಸುಗಳ ತ್ಯಾಗಕೆ;
ಗಂಡ ಮಕ್ಕಳ ಏಳಿಗೆಗೆ ಗೈದ ಪೂಜೆ ಪುನಸ್ಕಾರಕೆ;
ಈಕೆಗೆ ದೊರೆತ ಬಹುಮಾನ, ಬರೀ ಏಳಿದಿಕೆ;
ಏನಾದರೂ ಇವಳ ಪ್ರೀತಿ ಮಹಾಪೂರದಲಿ ಇರದು ಬತ್ತುಗೆ.

ಹೆಣ್ಣೆಂದರೆ ಇಳೆಯ ಪ್ರತಿಬಿಂಬ;
ಸಂಸಾರದ ಆಧಾರಸ್ತಂಭ;
ಇವಳು ಇತಿ ಮಿತಿ ಇಲ್ಲದ ಪ್ರೀತಿ ಬುತ್ತಿ;
ಹೊಂದಿರುವಳು ಲೋಕವನ್ನು ಮೀರಿಸುವ ಶಕ್ತಿ;
ಆದರು ಸಿಗದು ಇವಳಿಗೆ ಮನ್ನಣೆ;
ಮೂಢತೆಯಲ್ಲೇ ಉಳಿದಿಹುದು ಜನರ ಯೋಚನೆ;
ಇದೆಲ್ಲವನ್ನೂ ಸಹಿಸಿ ಬಾಳುತಲಿ ರುವ ಸ್ತ್ರೀ;
ಇವಳು ಸದಾ ಮನುಕುಲದ ಶ್ರೀ!

ಸಂತೋಷ್

Tuesday, September 24, 2019

ಮಳೆ... ಯೋಚನೆ...

ಸುರಿವ ಮಳೆಯಲಿ ನಿಂದು ನಾನರಿತೆ;
ಯೋಚನೆಯ ಸಮುದ್ರೆಯಲಿ ಮಿಂದು ನಾ ಕಲಿತೆ;
ಎಣಿಸಲಸಾಧ್ಯವು ಬೀಳೋ ಪ್ರತಿ ಮಳೆಹನಿಯನು;
ತಡೆಯಲಸಾಧ್ಯವು ಮನದಿ ಮೂಡೋ ನೂರು ಯೋಚನೆಯನು!

- ಸಂತೋಷ್

ಪ್ರೀತಿ...

ಪ್ರೀತಿಗೆ ಪ್ರೀತಿಸುವುದು ಮಾತ್ರವೇ ಗೊತ್ತು;
ಎಂಥವರನ್ನೂ ತನ್ನ ವ್ಯೂಹಕ್ಕೆ ಸೆಳೆವುದು;
ಮಾಯೆಯೋ ಮಾಯಿಯೋ ನಾನರಿಯೆ;
ನನ್ನರಸಿ ಬಂದವಗೆ ನಿಷ್ಕಲ್ಮಶ ಪ್ರೀತಿಯ ನಾನೆರೆವೆ!

ಸಂತೋಷ್